    ಮೂಲದೊಡನೆ ಪರಿಶೀಲಿಸಿ

ಅನುಷ್ಟುಭ್

ಶ್ಲೋಕದ ಮತ್ತೊಂದು ಹೆಸರು.  ವೈದಿಕ ಛಂದಸ್ಸಿನ ಮುಖ್ಯ ವಿಧಗಳಲ್ಲೊಂದು.  ಕೆಲವು ಮಾರ್ಪಾಡುಗಳನ್ನು ಹೊಂದಿ ಸಂಸ್ಕøತದ ಲೌಕಿಕ ಛಂದಸ್ಸಿನಲ್ಲಿ ಬಂದಿರುವ ವರ್ಣವೃತ್ತ.  ಸಮವೃತ್ತ, ಅರ್ಧಸಮವೃತ್ತ, ವಿಷಮವೃತ್ತ ಎಂಬ ಬಗೆಗಳುಳ್ಳ ಈ ವರ್ಣವೃತ್ತದಲ್ಲಿ ಮೊದಲನೆಯದರ ಇಪ್ಪತ್ತಾರು ವಿಧಗಳಲ್ಲೊಂದಾಗಿ ಪ್ರತಿಪಾದದಲ್ಲೂ ಎಂಟಕ್ಷರಗಳಿಂದ ಕೂಡಿರುವುದಲ್ಲದೆ ಶ್ಲೋಕ, ಗಜಗತಿ, ಪ್ರಮಾಣಿಕಾ ಮುಂತಾದ ಪ್ರಭೇದಗಳನ್ನೂ ತಾಳಿದೆ. ಲಕ್ಷಣ ಹೀಗಿದೆ: 

                              ಶ್ಲೋಕೇ ಷಷ್ಠ ಗುರುಜ್ಞೇಯಂ
                              ಸರ್ವತ್ರ ಲಘು ಪಂಚಮಮ್ 
                              ದ್ವಿಚತುಃಪಾದಯೋಹ್ರ್ರಸ್ವಂ
                              ಸಪ್ತಮಂ ದೀರ್ಘಮನ್ಯಯೋಃ
   
ಪ್ರತಿ ಪಾದದ ಐದನೆಯ ಅಕ್ಷರ ಲಘು, ಆರನೆಯದು ಗುರು, ಏಳನೆಯ ಅಕ್ಷರ ಎರಡನೆಯ ನಾಲ್ಕನೆಯ ಪಾದಗಳಲ್ಲಿ ಹ್ರಸ್ವ, ಉಳಿದೆರಡರಲ್ಲಿ ದೀರ್ಘ.  ಉದಾ: 
 
                              ವಾಗರ್ಥಾವಿವ ಸಂಪೃಕ್ತೌ
                              ವಾಗರ್ಥಪ್ರತಿಪತ್ತಯೇ 
                              ಜಗತಃ ಪಿತರೌ ವಂದೇ
                              ಪಾರ್ವತೀ ಪರಮೇಶ್ವರೌ
                                                     (ರಘುವಂಶ)

ಮೇಲ್ಕಂಡ ಲಕ್ಷಣದಿಂದ ಸ್ವಲ್ಪ ಭಿನ್ನವಾಗಿರುವ ಮತ್ತೊಂದು ಕೆಳಕಂಡಂತಿದೆ:

                               ಪಂಚಮಂ ಲಘು ಸರ್ವತ್ರ
                               ಸಪ್ತಮಂ ದ್ವಿಚತುರ್ಥಯೋಃ
	                         ಗುರು ಷಷ್ಠಂ ಚ ಪಾದಾನಾಂ
                               ಶೆಷೇಷ್ವ ನಿಯಮೋ ಮತಃ

ನಾಲ್ಕು ಪಾದಗಳಲ್ಲೂ ಐದನೆಯ ಅಕ್ಷರವೂ ಎರಡನೆಯ ಮತ್ತು ನಾಲ್ಕನೆಯ ಪಾದಗಳಲ್ಲಿ ಏಳನೆಯದೂ ಲಘು; ನಾಲ್ಕು ಪಾದಗಳ ಆರನೆಯ ಅಕ್ಷರ ಗುರು; ಉಳಿದವುಗಳಲ್ಲಿ ನಿಯತವಲ್ಲ.
ಇಂಥ ಭಿನ್ನ ಲಕ್ಷಣ ಇದರ ಬೆಳೆವಣಿಗೆಯಲ್ಲಿನ ಮಾರ್ಪಾಡನ್ನೂ ಇದರ ನಿಯಮಗಳು ಅಷ್ಟು ಕಟ್ಟುನಿಟ್ಟಿಲ್ಲವೆಂಬ ವಿಚಾರವನ್ನು ಸೂಚಿಸುತ್ತದೆ. ಇದು ಸಂಸ್ಕøತದಲ್ಲಿ ಹೆಚ್ಚು ಬಳಕೆಯಲ್ಲಿದೆ.  ರಾಮಾಯಣ, ಮಹಾಭಾರತಗಳೂ ಪುರಾಣಗಳೂ ವಿಶೇಷವಾಗಿ ಈ ವೃತ್ತದಲ್ಲಿವೆ.
ಕನ್ನಡ ಕವಿಗಳು ಮೊದಲು ಛಂದಸ್ಸನ್ನು ಹೆಚ್ಚಾಗಿ ಬಳಸಿಕೊಂಡರೋ ಇಲ್ಲವೊ ಹೇಳುವುದು ಕಷ್ಟ; ಸಾಕಷ್ಟು ನಿದರ್ಶನಗಳಿಲ್ಲ; ಆದರೆ ಕವಿರಾಜಮಾರ್ಗದಲ್ಲಿ ಇದರ ಸುಳಿವು ಕಾಣತ್ತದೆ.  ಒಟ್ಟಿನಲ್ಲಿ ಇದರ ಬಳಕೆ ಬಹು ಸ್ವಲ್ಪವೆಂದೇ ಹೇಳಬೇಕು.
(ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ